ಫೆಲ್ಡ್‍ಸ್ಪಾರ್
	ಭೂತೊಗಟೆಯ ಹೊರಭಾಗದ 15 ಕಿಮೀ ವ್ಯಾಪ್ತಿಯ ಶೇಕಡಾ 60 ಭಾಗವನ್ನು ಆಕ್ರಮಿಸಿರುವ ಸಿಲಿಕೇಟ್ ಖನಿಜಗಳ ಗುಂಪು. ಅಗ್ನಿ ಶಿಲೆಗಳು, ಪೆಗ್ಮಟೈಟುಗಳು, ಗೀರು ಶಿಲೆಗಳು, ಪದರು ಶಿಲೆಗಳು ಇತ್ಯಾದಿ ಸೇರಿ ಈ ಖನಿಜಗಳಾಗಿವೆ. ಅತ್ಯಂತ ಮುಖ್ಯವಾದ ಶಿಲಾರೂಪಕ ಖನಿಜಗಳು ಇವಾದುದರಿಂದ ಇವುಗಳ ಪ್ರಮಾಣ ಹಾಗೂ ರಾಸಾಯನಿಕ ಪ್ರಭೇದಗಳನ್ನು ಆಧರಿಸಿ ಅನೇಕ ಶಿಲೆಗಳನ್ನು ವರ್ಗೀಕರಿಸಲು ಸಾಧ್ಯವಾಗಿದೆ.

	ಫೆಲ್ಡ್‍ಸ್ಟಾರುಗಳನ್ನು ರಾಸಾಯನಿಕ ಸಂಯೋಜನೆಗಳಿಗೆ ಅನುಗುಣವಾಗಿ ಓಚಿಂಟSi3ಔ8—ಏಂಟSi3ಔ8—ಅಚಿಂಟ2Si2ಔ8 ಎಂಬ ತ್ರಯಾತ್ಮಕ ವ್ಯವಸ್ಥೆಯ ಘಟಕಗಳಾಗಿ ವರ್ಗೀಕರಿಸಬಹುದು. ಈ ಸಂಯೋಜನೆಗಳನ್ನು ಅನುಕ್ರಮವಾಗಿ ಸೋಡಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಮ್ ಫೆಲ್ಡ್‍ಸ್ಪಾರುಗಳೆಂದು ನಿರ್ದೇಶಿಸಲಾಗಿದೆ. ಶ್ರೇಣಿಯ ಓಚಿಂಟSi3ಔ8 ಮತ್ತು ಏಂಟSi3ಔ8 ನಡುವಣ ಪ್ರಭೇದಗಳನ್ನು ಆಲ್ಕಲಿ ಫೆಲ್ಡ್‍ಸ್ಪಾರುಗಳೆಂದು ಓಚಿಂಟSi3ಔ8 ಮತ್ತು ಅಚಿಂಟ2Si2ಔ8 ನಡುವಣ ಪ್ರಭೇದಗಳನ್ನು ಪ್ಲೇಜಿಯೊಕ್ಲೇಸ್ ಫಲ್ಡ್‍ಸ್ಪಾರುಗಳೆಂದು ಕರೆಯಲಾಗಿದೆ.
	ಆಲ್ಕಲಿ ಫೆಲ್ಡ್‍ಸ್ಪಾರುಗಳು : ಇವುಗಳಲ್ಲಿಯ ಪರಿಶುದ್ಧವಾದ ಸೋಡಿಯಮ್ ಸೀಮಾ ಪ್ರಭೇದವನ್ನು ಅದರ ರಚನೆಗೆ ಅನುಗುಣವಾಗಿ ಕನಿಷ್ಠ ಆಲ್ಬೈಟ್ ಗರಿಷ್ಠ ಆಲ್ಬೈಟ್ ಅಥವಾ ಮಧ್ಯವರ್ತಿ ಆಲ್ಬೈಟ್ ಎಂದು ಹೆಸರಿಸಲಾಗಿದೆ. ಸಾಮಾನ್ಯವಾಗಿ ಆಲ್ಬೈಟುಗಳು ಸ್ಫಟಿಕವಿಜ್ಞಾನದ ಟ್ರೈಕ್ಲಿನಿಕ್ ವರ್ಗಕ್ಕೆ ಸೇರಿವೆಯಾದರೂ ಅವನ್ನು ಹೆಚ್ಚಿನ ಉಷ್ಣಕ್ಕೆ ಒಡ್ಡಿದಾಗ ಮಾನೊಕ್ಲಿನಿಕ್ ಸಮಾಂಗತೆಗೆ ಮಾರ್ಪಡುತ್ತವೆ. ಸೋಡಿಯಮ್ ಫೆಲ್ಡ್‍ಸ್ಪಾರಿನ ಮತ್ತೊಂದು ಪ್ರಭೇದವೆಂದರೆ ಪೆರಿಕ್ಲಿನ್. ಇದನ್ನು ವಿಶಿಷ್ಟವಾದ ಪ್ರವೃತ್ತಿ ಮತ್ತು ಮಿತವಾದ ಸಹಜನನದಿಂದ ಗುರುತಿಸಲಾಗಿದೆ. ಇನ್ನು ಪೊಟ್ಯಾಸಿಯಮ್ ಸೀಮಾ ಪ್ರಭೇದವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು: ಹೆಚ್ಚಿನ ಉಷ್ಣತೆಗೆ ಅನುಗುಣವಾದ ರಚನೆಗಳಿಂದ ಕೂಡಿರುವ ಮಾನೊಕ್ಲಿನಿಕ್ ವರ್ಗಕ್ಕೆ ಸೇರಿದ ಸ್ಯಾನಿಡೀನುಗಳು, ಕಡಿಮೆ ಉಷ್ಣತೆಯ ಮಾನೊಕ್ಲಿನಿಕ್ ವರ್ಗದ ಅರ್ಥೊಕ್ಲೇಸುಗಳು, ಅತ್ಯಂತ ಕಡಿಮೆ ಉಷ್ಣತೆಯಲ್ಲಿ ರೂಪುಗೊಂಡಿರುವ ಪೊಟ್ಯಾಸಿಯಮ್ ಫೆಲ್ಡ್‍ಸ್ಪಾರುಗಳು ಅಥವಾ ಮೈಕ್ರೊಕ್ಲೀನುಗಳು. ಪೊಟ್ಯಾಸಿಯಮ್ ಫೆಲ್ಡ್‍ಸ್ಪಾರಿನ ಮತ್ತೊಂದು ಪ್ರಭೇದವಾದ ಆಡ್ಯುಲೇರಿಯಾವನ್ನು ಅದರ ಸ್ವರೂಪ ಮತ್ತು ಸಹಜನನದ ಆಧಾರದ ಮೇಲೆ ಗುರುತಿಸಲಾಗಿದೆ.

	ಪ್ಲೇಜಿಯೊಕ್ಲೇಸ್ ಫೆಲ್ಡ್ ಸ್ಪಾರುಗಳು : ಓಚಿಂಟSi3ಔ8 ಮತ್ತು ಅಚಿಂಟ2Si2ಔ8 ನಡುವಣ ಪ್ರಭೇದಗಳಿವು. ಅನುಕೂಲತೆಗಾಗಿ ಇವನ್ನು ಆರು ಸಂಯೋಜನಾ ಪ್ರಭೇದಗಳಂತೆ ವಿಂಗಡಿಸಿ ನಿರ್ದಿಷ್ಟ ಹೆಸರುಗಳನ್ನು ಇಡಲಾಗಿದೆ. ಇವನ್ನು ಅನುಸರಿಸಿ ಆಲ್ಬೈಟ್, ಆಲಿಗೊಕ್ಲೇಸ್, ಆ್ಯಂಡಿಸೀನ್, ಲ್ಯಾಬ್ರಡರೈಟ್, ಬೈಟೊನೈಟ್ ಮತ್ತು ಅನಾರ್ಥೈಟ್ ಹೆಸರುಗಳು ಅನುಕ್ರಮವಾಗಿ 0-10, 10-30, 30-50, 50-70, 70-90, 90-100 ಅನಾರ್ಥೈಟಿನ ಶೇಕಡಾವಾರು ಪ್ರಮಾಣಗಳಿಗೆ ಸೂಚಿತವಾಗಿವೆ.

	ಕರ್ನಾಟಕದಲ್ಲಿ ಹಂಚಿಕೆ : ಕರ್ನಾಟಕದಲ್ಲಿ ಫೆಲ್ಡ್‍ಸ್ಪಾರ್ ಖನಿಜಗಳು ದೊಡ್ಡ ದೊಡ್ಡ ಹರಳುಗಳಂತೆ ಕಣಶಿಲೆಯ ಪೆಗ್ಮಟೈಟ್ ಸಿರಗಳಲ್ಲಿ ದೊರೆಯುತ್ತವೆ. ಹೊಳೆನರಸೀಪುರ ಮತ್ತು ಅರಸೀಕೆರೆ ಪ್ರದೇಶಗಳಲ್ಲಿಯ ಪೆಗ್ಮಟೈಟ್ ಸಿರಗಳಲ್ಲಿ ದೊರೆಯುವ ಫೆಲ್ಡ್‍ಸ್ಪಾರುಗಳು ಪೊಟ್ಯಾಸಿಯಮ್ ಫೆಲ್ಡ್‍ಸ್ಪಾರುಗಳೆಂದು ತಿಳಿದು ಬಂದಿದೆ. ಇಂಥವೇ ಫೆಲ್ಡ್‍ಸ್ಟಾರ್ ಖನಿಜ ಬೆಂಗಳೂರಿನ ಸಮೀಪದಲ್ಲಿರುವ ಶೆಟ್ಟಿಹಳ್ಳಿ, ಕೋಲಾರ ಜಿಲ್ಲೆಯ ತೊಂಡೇಬಾವಿ ಮತ್ತು ಕಾಮಸಮುದ್ರ, ಮೈಸೂರು ಜಿಲ್ಲೆಯ ಕೃಷ್ಣರಾಜಪೇಟೆ, ಸಾಗರದ ಬಳಿಯಿರುವ ಕಟೇರಿ ಮುಂತಾದ ಪ್ರದೇಶಗಳ ಪೆಗ್ಮಟೈಟ್ ಸಿರಗಳಲ್ಲಿ ದೊರೆಯುತ್ತವೆ.

	ಉಪಯೋಗಗಳು : ಫೆಲ್ಡ್‍ಸ್ಪಾರ್ ಖನಿಜವರ್ಗದ ಸೋಡಿಯಮ್ ಮತ್ತು ಪೊಟ್ಯಾಸಿಯಮ್ ವಿಧಗಳು, ಅದರಲ್ಲಿಯೂ ಪೊಟ್ಯಾಸಿಯಮ್ ವಿಧ, ಕೈಗಾರಿಕೆಯಲ್ಲಿ ಹೆಚ್ಚಿನ ಬಳಕೆಯಲ್ಲಿವೆ. ಇವನ್ನು ಕುಂಭಕಲೆಯಲ್ಲಿ ಕುಂಭವಸ್ತುಗಳ ತಯಾರಿಕೆಗೂ ಅವುಗಳಿಗೆ ಮೆರುಗು ಕೊಡುವುದಕ್ಕೂ ಉಪಯೋಗಿಸುತ್ತಾರೆ. ಇವು ಪಿಂಗಾಣಿ ಮತ್ತು ಗಾಜಿನ ತಯಾರಿಕೆಯಲ್ಲಿ ಮಾತ್ರವಲ್ಲದೆ ಗೃಹಪಾತ್ರೆಗಳು, ಹಾಸುವ ಹಂಚುಗಳು, ನೈರ್ಮಲ್ಯ ವಸ್ತುಗಳು ವಿದ್ಯುದವಾಹಕ ಮುಂತಾದ ವಸ್ತುಗಳು ಇತ್ಯಾದಿಗಳಿಗೆ ಮೆರುಗು ಕೊಡುವುದಕ್ಕೆ ಕೂಡ ಉಪಯೋಗವಾಗುತ್ತವೆ. ಅಪರೂಪವಾದ ಕೆಲವು ಫೆಲ್ಡ್‍ಸ್ಪಾರ್ ಹರಳುಗಳನ್ನು ಅಲಂಕಾರ ಕಲ್ಲುಗಳಂತೆಯೂ ರತ್ನ ಖನಿಜಗಳಂತೆಯೂ ಬಳಸುವುದುಂಟು.
(ಆರ್.ಎನ್‍ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ